ಪೀಠಿಕೆ:
ನಗರ ಮತ್ತು ಗ್ರಾಮಾಂತರ    ಯೋಜನಾ ಇಲಾಖೆಯ ಕೇಂದ್ರ ಕಛೇರಿಯು ಬೆಂಗಳೂರಿನಲ್ಲಿದ್ದು, ನಗರ ಮತ್ತು ಗ್ರಾಮಾಂತರ    ಯೋಜನಾ ನಿರ್ದೇಶಕರು ಮುಖ್ಯಸ್ಥರಾಗಿರುತ್ತಾರೆ. ಈ ಇಲಾಖೆಯ ಒಂದು ವಲಯ ಕಛೇರಿಯು ಧಾರವಾಡದಲ್ಲಿ ಮತ್ತು ಮೂರು ವಿಭಾಗೀಯ ಕಛೇರಿಗಳು, ಬೆಂಗಳೂರು, ಮೈಸೂರು ಹಾಗೂ ಕಲುಬುರಗಿಯಲ್ಲಿದ್ದು, ಧಾರವಾಡ ವಲಯ ಕಛೇರಿಯು ನಗರ ಮತ್ತು ಗ್ರಾಮಾಂತರ ಯೋಜನಾ ಹೆಚ್ಚುವರಿ ನಿರ್ದೇಶಕರು ಇವರ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉಳಿದ ಮೂರು ವಿಭಾಗೀಯ ಕಛೇರಿಗಳು ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಜೊತೆಗೆ ಇಲಾಖೆಯ 30 ಶಾಖಾ ಕಛೇರಿಗಳು ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಜಿಲ್ಲಾ ಕೇಂದ್ರ ಹಾಗೂ ಇತರ ಪ್ರಮುಖ ತಾಲ್ಲೂಕು ಕೇಂದ್ರಗಳಲ್ಲಿದ್ದು, ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಉಸ್ತುವಾರಿಯಲ್ಲಿ  ಕಾರ್ಯನಿರ್ವಹಿಸುತ್ತಿವೆ

ಇಲಾಖೆಯ ಕಾರ್ಯಚಟುವಟಿಕೆಗಳು :
ರಾಜ್ಯದ ನಗರ : ಪಟ್ಟಣ ಹಾಗೂ ಗ್ರಾಮಗಳ ಯೋಜಿತ ಬೆಳವಣôಗೆಗಾಗಿ ಮಹಾ ಯೋಜನೆಗಳನ್ನು ಸಿದ್ದಪಡಿಸಿ,    ಈ ಯೋಜನೆಗಳನ್ನು ಜಾರಿಗೊಳಿಸುವುದು ಇಲಾಖೆಯ ಪ್ರಮುಖ ಕಾರ್ಯವಾಗಿರುತ್ತದೆ.

  • ನಗರ : ಪಟ್ಟಣ ಮತ್ತು ಅಭಿವೃದ್ಧಿ ಪಥದಲ್ಲಿ ಇರುವ ಗ್ರಾಮಗಳ ಭೌತಿಕ, ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷಣೆ ಮಾಡಿ ಮಹಾಯೋಜನೆ (ಮಾಸ್ಟರ್ ಪ್ಲಾನ್)ಗಳನ್ನು ಸಿದ್ಧಪಡಿಸುವುದು, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮದಡಿ ಈ ಯೋಜನೆಗಳನ್ನು ಸರ್ಕಾರಕ್ಕೆ ಸಲ್ಲಿಸಿ, ಅಂಗೀಕಾರ ಪಡೆಯುವುದು.
  • ಪಟ್ಟಣ ಮತ್ತು ಗ್ರಾಮ ವಿಸ್ತರಣಾ (ಬಡಾವಣೆ) ಯೋಜನೆ : ಅಭಿವೃದ್ಧಿ ಸುಧಾರಣಾ ಯೋಜನೆಗಳು : ಪುನರ್ವಸತಿ ಯೋಜನೆಗಳು : ಆಶ್ರಯ ಯೋಜನೆಗಳು : ಮತ್ತಿತರ ಯೋಜನೆಗಳನ್ನು ತಯಾರಿಸುವುದು.
  • ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ನಿಯಮಗಳನ್ನು ಅನುಷ್ಠಾನಕ್ಕೆ ತರುವ ವಿಷಯದಲ್ಲಿ ಯೋಜನೆಗಳನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಮತ್ತು ನಗರ ಯೋಜನಾ ಪ್ರಾಧಿಕಾರಗಳಿಗೆ ಯೋಜನಾ ವಿಷಯಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ನೆರವು ನೀಡುವುದು.
  • ರಾಜ್ಯ ಸರ್ಕಾರ ರಚಿಸಿರುವ ಕರ್ನಾಟಕ ಗೃಹ ಮಂಡಳಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ, ಮತ್ತಿತರ ಸಂಸ್ಥೆಗಳಿಗೆ ಯೋಜನಾ ವಿಷಯಗಳಿಗೆ ಸಂಬಂಧಿಸಿದಂತೆ ನೆರವು ನೀಡುವುದು.
  • ಸರ್ಕಾರಿ ಇಲಾಖೆಗಳು: ಅರೆ ಸರ್ಕಾರಿ ಸಂಸ್ಥೆಗಳು : ಸ್ಥಳೀಯ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳ ಕೋರಿಕೆ ಮೇರೆಗೆ ವಿನ್ಯಾಸ ರೂಪಿಸಿ ತಾಂತ್ರಿಕ ಅನುಮೋದನೆ ನೀಡುವುದು.
  • ವ್ಯವಸಾಯ ಭೂಮಿಯನ್ನು ವ್ಯವಸಾಯೇತರ ಉದ್ದೇಶಗಳಿಗಾಗಿ ಪರಿವರ್ತಿಸಲು ಕಂದಾಯ ಇಲಾಖೆಗೆ ತಾಂತ್ರಿಕ ಅಭಿಪ್ರಾಯ : ನೆರವು ನೀಡುವುದು.
  • ಸುವ್ಯವಸ್ಥಿತ, ಸುರಕ್ಷಿತ ಹಾಗೂ ಸಮರ್ಥ ಸಂಚಾರ ನಿರ್ವಹಣಾ ಯೋಜನೆಗಳನ್ನು ರೂಪಿಸುವುದು ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಸಲಹೆ ನೀಡುವುದು.

ಆಡಳಿತ :
ಕೇಂದ್ರ ಕಛೇರಿಯಲ್ಲಿ ಇಲಾಖಾ ಮುಖ್ಯಸ್ಥರಾದ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರು, ಇಬ್ಬರು ನಗರ ಮತ್ತು ಗ್ರಾಮಾಂತರ ಯೋಜನಾ ಉಪ ನಿರ್ದೇಶಕರು, ನಾಲ್ಕು ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರು ಮತ್ತು ವಿವಿಧ ವೃಂದದ ತಾಂತ್ರಿಕ ಸಿಬ್ಬಂದಿ ನೆರವಿನಿಂದ ಯೋಜನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುವ ಕೆಲಸ ನಿರ್ವಹಿಸುತ್ತಿದ್ದಾರೆ.  ಆಡಳಿತಾತ್ಮಕ ಕಾರ್ಯದಲ್ಲಿ ಪತ್ರಾಂಕಿತ ವ್ಯವಸ್ಥಾಪಕರು ಮತ್ತು ಲೆಕ್ಕಾಧೀಕ್ಷಕರು, ಆಡಳಿತ ಮತ್ತು ಲೆಕ್ಕ ವಿಭಾಗದ ಸಿಬ್ಬಂದಿ ವರ್ಗದವರೊಂದಿಗೆ ನಿರ್ದೇಶಕರಿಗೆ ನೆರವಾಗುತ್ತಿದ್ದಾರೆ.

ಮೂಲ:ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ, ಬೆಂಗಳೂರು, ಕರ್ನಾಟಕ ಸರ್ಕಾರ.